ಮುಚ್ಚಿ

ಆಸಕ್ತಿಯ ಸ್ಥಳಗಳು

ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳು

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಮಂಗಳೂರು

ಮಂಗಳಾದೇವಿ ದೇವಸ್ಥಾನಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನವು ಮಂಗಳೂರು ನಗರದ ಹೃದಯ ಭಾಗದಲ್ಲಿದ್ದು, ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ ಮಂಗಳಾಂಬೆಯಿಂದ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ. ದೇವಸ್ಥಾನವು ಮಂಗಳೂರು ನಗರದಿಂದ ಸುಮಾರು 2 ಕಿ.ಮೀ ದೂರದಲ್ಲಿದ್ದು, ಮಂಗಳೂರು ನಗರ ವಿವಿದ ಕಡೆಗಳಿಂದಲೂ ದೇವಸ್ಥಾನಕ್ಕೆ ತಲುಪಲು ಉತ್ತಮವಾದ ಖಾಸಗಿ ನಗರ ಸಾರಿಗೆಯ ಬಸ್ ಸೌಲಭ್ಯವಿದೆ.

ಕದ್ರಿ ಮಂಜುನಾಥ ದೇವಸ್ಥಾನ, ಮಂಗಳೂರು

ಕದ್ರಿ ದೇವಸ್ಥಾನಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನ 10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಸುತ್ತ ಹಸಿರು ಕಾನನ, ದೇವಸ್ಥಾನದ ಹಿಂಬದಿ ದೊಡ್ಡ ಬೆಟ್ಟ, ಬೆಟ್ಟದ ಮೇಲೆ ಪಾಂಡವರ ಗುಹೆಗಳು ಎಂದು ಕರೆಯಲ್ಪಡುವ ಕಲ್ಲುಗುಹೆಗಳಿವೆ. ದೇವಾಲಯದ ಹಿಂಭಾಗದಲ್ಲಿ ನೀರಿನ ಚಿಲುಮೆಯೊಂದಿದ್ದು ಪಕ್ಕದಲ್ಲೆ ಇರುವ ಕೊಳಗಳಿಗೆ ಇದರ ನೀರು ಹರಿಯುತ್ತದೆ. ದೇವಸ್ಥಾನವು ಮಂಗಳೂರು ನಗರದ ಹೃದಯಭಾಗದಿಂದ ಸುಮಾರು 2 ಕಿ.ಮೀ ದೂರದಲ್ಲಿದೆ.

ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಮಂಗಳೂರು

ಕುದ್ರೋಳಿ ದೇವಸ್ಥಾನನಗರದ ಹೃದಯ ಭಾಗದಿಂದ ಕೇವಲ 2 ಕಿ.ಮೀ ದೂರದಲ್ಲಿವ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ಕೇರಳದ ಶ್ರೇಷ್ಠ ತತ್ವಜ್ಞಾನಿ, ಸಂತ ಮತ್ತು ಸಾಮಾಜಿಕ ಸುಧಾರಕರಾದ ಶ್ರೀ ನಾರಾಯಣ ಗುರು ನಿರ್ಮಿಸಿದ್ದಾರೆ. ಈ ದೇವಸ್ಥಾನವನ್ನು ಚೋಳರು ಗೋಪುರವನ್ನು ರಚಿಸುವ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನದ ಮುಖ್ಯ ಆರಾಧ್ಯ ದೇವರು ಶಿವ. ನವರಾತ್ರಿ ಮತ್ತು ಶಿವರಾತ್ರಿ ಈ ದೇವಾಲಯದಲ್ಲಿ ಆಚರಿಸಲಾಗುವ ಎರಡು ದೊಡ್ಡ ಉತ್ಸವಗಳಾಗಿವೆ. ದಸರಾ ಸಮಯದಲ್ಲಿ ದೇವಾಲಯದ ಆಚರಣೆಗಳು ಜನಪ್ರಿಯವಾಗಿ ಮಂಗಳೂರು ದಸರಾ ಎಂದು ಕರೆಯಲ್ಪಡುತ್ತದೆ.

ದರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ

ಧರ್ಮಸ್ಥಳ ದೇವಸ್ಥಾನಈ ಪ್ರಸಿದ್ಧ ದೇವಸ್ಥಾನವು ಮಂಗಳೂರಿನ ಪೂರ್ವಕ್ಕೆ ಸುಮಾರು 75 ಕಿ.ಮೀ. ದೂರದಲ್ಲಿ ಬೆಳ್ತಂಗಡಿ ತಾಲೂಕಿನ ಪಶ್ಚಿಮ ಘಟ್ಟಗಳ ಇಳಿಜಾರಿನ ಕಾಡಿನ ಮಧ್ಯದಲ್ಲಿ ಸ್ಥಾಪಿತವಾಗಿದೆ. ಮಂಜುನಾಥ ದೇವಾಲಯವು ಶೈವರ ಆರಾಧ್ಯ ಕೇಂದ್ರವಾಗಿದ್ದು, ಇದು ಮಧ್ವ ವೈಷ್ಣವ ಪಂಥದ ಪುರೋಹಿತರನ್ನು ಹೊಂದಿದೆ ಮತ್ತು ಈ ದೇವಸ್ಥಾನದ ಉಸ್ತುವಾರಿಯನ್ನು ಜೈನ ಪಂಥಕ್ಕೆ ಸೇರಿದ ಹೆಗ್ಗಡೆ ಕುಟುಂಬದವರು ವಂಶ ಪಾರಂಪರ್ಯವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ದೇವಾಲಯದ ಬಳಿ ಬೆಟ್ಟದ ಮೇಲೆ 39 ಅಡಿ ಎತ್ತರದ ಬಾಹುಬಲಿಯ ಮೂರ್ತಿಯನ್ನು 1980 ರಲ್ಲಿ ಸ್ಥಾಪಿಸಲಾಗಿದೆ. ದೇವಾಲಯದ ಎದುರು ಮಂಜುಷ ಎಂಬ ವಸ್ತು ಸಂಗ್ರಹಾಲಯವಿದೆ. ಇಲ್ಲಿ ನಾವು ಪ್ರಾಚೀನ ವಸ್ತುಗಳು, ವರ್ಣಚಿತ್ರಗಳು, ತಾಳೆಗರಿ ಮೇಲಿರುವ ಪ್ರಾಚೀನ ಲಿಪಿಗಳು, ದೇವಾಲಯದ ರಥಗಳು ಇತ್ಯಾದಿ ಸಂಗ್ರಹಗಳನ್ನು ಕಾಣಬಹುದು. ಶ್ರೀ ಕ್ಷೇತ್ರವು ದಾನ ಮತ್ತು ಧಾರ್ಮಕ್ಕೆ ಪ್ರಸಿದ್ಧಿಯಾಗಿದ್ದು,ಇಲ್ಲಿ ನಿತ್ಯವೂ ಅನ್ನದಾಸೋಹ ನಡೆಯುತ್ತದೆ. ಲಕ್ಷ ದೀಪೋತ್ಸವ ವಾರ್ಷಿಕ ಉತ್ಸವದ ಸಂದರ್ಭದಲ್ಲಿ, ಒಂದು ಲಕ್ಷ ದೀಪಗಳು ಬೆಳಗಿಸುವುದು ಇಲ್ಲಿನ ವೈಶಿಷ್ಟ್ಯ. ಈ ಸಂದರ್ಭದಲ್ಲಿ ಸಾಹಿತ್ಯ ಹಾಗು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ಕುಕ್ಕೆ ಸುಬ್ರಮಣ್ಯ ದೇವಸ್ಥಾನ

ಕುಕ್ಕೆ ದೇವಸ್ಥಾನಮಂಗಳೂರಿನಿಂದ 104 ಕಿ.ಮೀ. ದೂರದಲ್ಲಿ ಬೆಟ್ಟಗಳ ನಡುವೆ ಇರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಸುಪ್ರಸಿದ್ದ ಯಾತ್ರಾಸ್ಥಳವಾಗಿದೆ. ದೈವಿಕ ಸರ್ಪ ವಾಸುಕಿ ಮತ್ತು ಇತರ ಸರ್ಪಗಳು ಹೇಗೆ ಇಲ್ಲಿಯ ಗುಹೆಗಳಲ್ಲಿ ಸುಬ್ರಹ್ಮಣ್ಯ ದೇವರ ಅಡಿಯಲ್ಲಿ ಆಶ್ರಯ ಪಡೆದುಕೊಂಡವು ಎಂಬುದನ್ನು ಮಹಾಕಾವ್ಯಗಳಲ್ಲಿ ಹೇಳಲಾಗಿದೆ. ಇಲ್ಲಿ ಸುಬ್ರಹ್ಮಣ್ಯ ದೇವರನ್ನು ದೈವಿಕ ಶಕ್ತಿಯಿರುವ ಸರ್ಪ ರೂಪವೆಂದು ಎಂದು ಪೂಜಿಸಲಾಗುತ್ತದೆ. ಇಲ್ಲಿ ನಾಗಮಂಡಲ ಎಂಬ ಧಾರ್ಮಿಕ ನೃತ್ಯವನ್ನು ಆರಾಧನೆಯ ಸಮಯದಲ್ಲಿ ನಡೆಸಲಾಗುತ್ತದೆ. ಈ ಕ್ಷೇತ್ರವು ಸರ್ಪ ದೋಷ ನಿವಾರಣೆಗೆ ಪ್ರಸಿದ್ಧವಾಗಿದ್ದು ಸರ್ಪ ಸಂಸ್ಕಾರ ಪೂಜೆ ಇಲ್ಲಿಯ ವಿಶೇಷವಾಗಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಕಟೀಲು ದೇವಸ್ಥಾನಮಂಗಳೂರಿನಿಂದ 20 ಕಿ.ಮೀ ಪೂರ್ವದಲ್ಲಿ ಕಟೀಲ್ ಎಂಬಲ್ಲಿ ನಂದಿನಿ ನದಿಯ ಮಧ್ಯದ ದ್ವೀಪದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವಿದೆ. ಇಲ್ಲಿಯ ಮುಖ್ಯ ದೇವತೆ ಉದ್ಭವ ಮೂರ್ತಿಯ ರೂಪದಲ್ಲಿದೆ (ನೈಸರ್ಗಿಕವಾಗಿ ರೂಪುಗೊಂಡ). ಇಲ್ಲಿನ ದೇವಾಲಯದ ಸ್ತಂಭಗಳಲ್ಲಿ ಸುಂದರವಾದ ಶಿಲ್ಪಕಲೆಗಳಿವೆ. ಯಕ್ಷಗಾನ ಬಯಲಾಟ ಸೇವೆ ಇಲ್ಲಿಯ ವಿಶೇಷತೆ.

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ

ಸೌತಡ್ಕ ದೇವಸ್ಥಾನಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ದೇವಸ್ಥಾನವಾಗಿದ್ದು, ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರದ ವಿಶೇಷವೆಂದರೆ ಇಲ್ಲಿನ ಆರಾಧ್ಯ ದೇವರಾದ ಗಣಪನಿಗೆ ಗರ್ಭಗುಡಿ, ದೇವಸ್ಥಾನವಿಲ್ಲದೆ ಮುಕ್ತವಾದ ವಾತವರಣದಲ್ಲಿದೆ.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,ಬಪ್ಪನಾಡು, ಮುಲ್ಕಿ,ಮಂಗಳೂರು ತಾಲೂಕು

ಬಪ್ಪನಾಡು ದೇವಸ್ಥಾನಮಂಗಳೂರಿನಿಂದ ಉತ್ತರಕ್ಕೆ 29 ಕಿಲೋಮೀಟರ್ ದೂರದಲ್ಲಿ (ಉಡುಪಿ ಮಾರ್ಗದಲ್ಲಿ) ಶಾಂಭವಿ ನದಿಯ ತಟದಲ್ಲಿ ಈ ದೇವಾಲಯವಿದೆ. ಈ ದೇವಸ್ಥಾನದ ಮುಖ್ಯ ಆರಾಧ್ಯ ದೇವತೆ ಶ್ರೀ ದುರ್ಗಾಪರಮೇಶ್ವರಿ. ಈ ದೇವಳದ ಒಂದು ವೈಶಿಷ್ಟ್ಯ ಬಪ್ಪನಾಡು ಡೋಲು. ದೇವಳದ ವಾರ್ಷಿಕ ಉತ್ಸವದ ಸಮಯದಲ್ಲಿ ಬಪ್ಪನಾಡು ಡೋಲು (ಚಂಡೆ) ಬಾರಿಸುವುದು ಆಚರಣೆಯ ಪ್ರಮುಖ ಭಾಗವಾಗಿದೆ.

ಶ್ರೀ ರಾಜ ರಾಜೇಶ್ವರಿ ದೇವಸ್ಥಾನ, ಪೊಳಲಿ, ಬಂಟ್ವಾಳ ತಾಲೂಕು

ಪೊಳಲಿ ದೇವಸ್ಥಾನಈ ದೇವಾಲಯವು ಬಂಟ್ವಾಳ ತಾಲೂಕಿನ ಕರಿಯಾಂಗಳ ಗ್ರಾಮದ ಫಾಲ್ಗುಣಿ ನದಿಯ ದಡದಲ್ಲಿದೆ. ಈ ಕ್ಷೇತ್ರ ಮಂಗಳೂರು ನಗರದಿಂದ 20 ಕಿ.ಮೀ ದೂರದಲ್ಲಿದೆ ಮತ್ತು ಮಂಗಳೂರಿನ ವಿಮಾನ ನಿಲ್ದಾಣದಿಂದ (ಬಜ್ಪೆ) ಸುಮಾರು 10 ಕಿ.ಮೀ. ದೂರದಲ್ಲಿದೆ. ಪೊಳಲಿ ಜಾತ್ರೆಯಲ್ಲಿ ನಡೆಯುವ ‘ಪೊಳಲಿ ಚೆಂಡು’ ಇಲ್ಲಿಯ ಪ್ರಮುಖ ಆಕರ್ಷಣೆ. ಎರಡು ಪಂಗಡಗಳ ನಡುವೆ ಈ ಆಟವನ್ನು ಏರ್ಪಡಿಸಲಾಗುತ್ತದೆ. ಇದು ಒಳ್ಳೆಯ ಮತ್ತು ಕೆಟ್ಟದರ ನಡುವಿನ ಹೋರಾಟವನ್ನು ಸಾಂಕೇತಿಸುತ್ತದೆ. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆಯುವ ಈ ವಾರ್ಷಿಕ ಉತ್ಸವವು ಒಂದು ತಿಂಗಳ ಕಾಲ ನಡೆಯುತ್ತದೆ ಮತ್ತು ಪ್ರಪಂಚದಾದ್ಯಂತದ ಜನರು ಈ ಉತ್ಸವವನ್ನು ನೋಡಲು ಬರುತ್ತಾರೆ.

ಶ್ರೀ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು

ಪುತ್ತೂರು ದೇವಸ್ಥಾನ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು 12 ನೇ ಶತಮಾನದ ದೇವಾಲಯವಾಗಿದೆ. ಇದು ದಕ್ಷಿಣ ಕನ್ನಡದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ ಹಾಗು ಪುತ್ತೂರು ನಗರದಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಮಹಾಲಿಂಗೇಶ್ವರ ಜಾತ್ರೆಯನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಉತ್ಸವದ ಸಮಯದಲ್ಲಿ ಸುಮಾರು ಒಂದು ಲಕ್ಷ ಜನರು ಪುತ್ತೂರಿಗೆ ಭೇಟಿ ನೀಡುತ್ತಾರೆ.

ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ, ಬಂಟ್ವಾಳ ತಾಲ್ಲೂಕು

ಕಾರಿಂಜ ದೇವಸ್ಥಾನಈ ಕ್ಷೇತ್ರವು ಬಂಟ್ವಾಳ ತಾಲೂಕಿನ ಕಾವಳಮೂಡುರು ಗ್ರಾಮದ ಕಾರಿಂಜ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಮಂಗಳೂರಿನಿಂದ ಸುಮಾರು 38 ಕಿ.ಮೀ ಮತ್ತು ಬಂಟ್ವಾಳದಿಂದ ಸುಮಾರು 14 ಕಿ.ಮೀ ದೂರದಲ್ಲಿದೆ. ಮಂಗಳೂರು – ಬೆಳ್ತಂಗಡಿ ಮಾರ್ಗದಲ್ಲಿ ವಗ್ಗ ಎಂಬ ಸ್ಥಳದಿಂದ (2 ಕಿಮೀ)ದೇವಸ್ಥಾನಕ್ಕೆ ಹೋಗಬಹುದು. ಸುತ್ತಲೂ ಹಸಿರಿನ ಬೆಟ್ಟದ ಮೇಲೆ ಕಾರಿಂಜೇಶ್ವರ ದೇವಸ್ಥಾನವಿದೆ. ಕಾರಿಂಜೇಶ್ವರವು ಶಿವ-ಪಾರ್ವತಿಯರ ದೇವಸ್ಥಾನವಾಗಿದೆ.

ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಕುಡುಪು ,ಮಂಗಳೂರು

ಕುಡುಪು ದೇವಸ್ಥಾನಈ ಕ್ಷೇತ್ರವು ಮಂಗಳೂರುನಿಂದ ಸುಮಾರು 10 ಕಿ.ಮೀ ದೂರದಲ್ಲಿ ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿದೆ. ಈ ದೇವಸ್ಥಾನವು ಅನಂತ ಪದ್ಮನಾಭನಿಗೆ (ವಿಷ್ಣು) ಸಮರ್ಪಿತವಾಗಿದೆ ಮತ್ತು ನಾಗಾರಾಧನೆಗೆ ಪ್ರಸಿದ್ಧವಾಗಿದೆ. ವಾರ್ಷಿಕ ಉತ್ಸವ ‘ಷಷ್ಠಿ’ ಇಲ್ಲಿನ ಪ್ರಸಿದ್ಧ ಧಾರ್ಮಿಕ ಸಮಾರಂಭವಾಗಿದೆ ಮತ್ತು ‘ನಾಗರಪಂಚಮಿ’ ಯನ್ನು ಇಲ್ಲಿ ಭಕ್ತಿಯಿಂದ ಆಚರಿಸಲಾಗುತ್ತದೆ.

ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ, ಪಾಣೆಮಂಗಳೂರು, ಬಂಟ್ವಾಳ ತಾಲ್ಲೂಕು

ನರಹರಿ ಪರ್ವತ ದೇವಾಲಯಈ ದೇವಸ್ಥಾನವು ಮಂಗಳೂರು ನಗರದಿಂದ 28 ಕಿ.ಮೀ ದೂರದಲ್ಲಿ ಬಂಟ್ವಾಳ ತಾಲೂಕಿನ ಪಾಣೆ-ಮಂಗಳೂರಿನ ಸಮೀಪದಲ್ಲಿದೆ. ಇದು ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಬೆಟ್ಟದ ತುದಿಯಲ್ಲಿದೆ. ಈ ದೇವಸ್ಥಾನವನ್ನು ತಲುಪಲು ಬೆಟ್ಟವನ್ನು ಹತ್ತಿ ಹೋಗಬೇಕು. ಈ ದೇವಸ್ಥಾನದಲ್ಲಿ ಸದಾಶಿವನನ್ನು ಆರಾಧಿಸುತ್ತಾರೆ. ಬೆಟ್ಟದ ಮೇಲೆ ನೀರಿನ ಕೊಳಗಳು ಇವೆ ಮತ್ತು ಈ ಕೊಳದಲ್ಲಿರುವ ನೀರನ್ನು ಭಕ್ತರು ಪವಿತ್ರವೆಂದು ಪರಿಗಣಿಸುತ್ತಾರೆ.

ಮಂಗಳೂರಿನ ಬೀಚ್ ಗಳು

ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್

ಸಮ್ಮರ್ ಸ್ಯಾಂಡ್ಸ್ಉಳ್ಳಾಲದಲ್ಲಿರುವ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ ಮಂಗಳೂರಿನ ದಕ್ಷಿಣಕ್ಕೆ 10 ಕಿ.ಮೀ ದೂರದಲ್ಲಿದೆ. 14 ಎಕರೆಗಳ ವಿಸ್ತಾರವಾದ ಪ್ರದೇಶದಲ್ಲಿರುವ ಈ ರೆಸಾರ್ಟ್ ನ ಕಾಟೇಜ್ ನಲ್ಲಿರುವ ಕೋಣೆಗಳು ಅತಿಥಿ ಸೌಕರ್ಯಗಳಿಗೆ ಅನುಗುಣವಾಗಿ ಅಲಂಕರಿಸಲ್ಪಟ್ಟಿದೆ. ಇಲ್ಲಿ ತಯಾರಿಸುವ ರುಚಿಯಾದ ಸೀ ಫುಡ್ ಈ ರೆಸಾರ್ಟ್ ನ ಇನ್ನೊಂದು ವಿಶೇಷತೆ.

ಸೋಮೇಶ್ವರ ಬೀಚ್

ಸೋಮೇಶ್ವರ ಬೀಚ್ಮಂಗಳೂರಿಗೆ ದಕ್ಷಿಣಕ್ಕೆ 13 ಕಿಮೀ ಮತ್ತು ಸೋಮೇಶ್ವರ ಬಸ್ ನಿಲ್ದಾಣದಿಂದ 1/2 ಕಿಮೀ, ದೂರದಲ್ಲಿರುವ ಈ ಬೀಚ್ “ರುದ್ರ ಶಿಲೆ” ಎಂಬ ದೊಡ್ಡ ಬಂಡೆಗಳಿಗೆ ಹೆಸರುವಾಸಿಯಾಗಿದೆ. ರಾಣಿ ಅಬ್ಬಕ್ಕ ದೇವಿಯ ಆಳ್ವಿಕೆಯಲ್ಲಿ ನಿರ್ಮಿಸಲಾದ ಪ್ರಸಿದ್ಧ ಐತಿಹಾಸಿಕ ಸೋಮನಾಥ ದೇವಸ್ಥಾನವು ಈ ಬೀಚ್ ನ ಉತ್ತರ ಭಾಗದಲ್ಲಿದೆ.

ತಣ್ಣೀರುಬಾವಿ ಬೀಚ್

ತಣ್ಣೀರು ಬಾವಿ ಬೀಚ್ಮಂಗಳೂರಿನಲ್ಲಿರುವ ತಣ್ಣೀರು ಬಾವಿ ಬೀಚ್ ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ಇದು ಮಂಗಳೂರು ನಗರದ ಮಲಬಾರ್ ಕರಾವಳಿಯಲ್ಲಿರುವ ಜನಪ್ರಿಯ ಬೀಚ್ ಗಳಲ್ಲಿ ಒಂದಾಗಿದೆ. ತಣ್ಣೀರು ಬಾವಿ ಬೀಚ್ ಮಂಗಳೂರಿನಿಂದ 12 ಕಿ.ಮೀ ದೂರದಲ್ಲಿದ್ದು,ಪ್ರವಾಸಿಗರು ಇಲ್ಲಿನ ಪ್ರಕೃತಿಯನ್ನು ಹಾಗು ಸೂರ್ಯಾಸ್ತವನ್ನು ಆನಂದಿಸಬಹುದು.

ಪಣಂಬೂರು ಬೀಚ್

ಪಣಂಬೂರು ಬೀಚ್ಮಂಗಳೂರು ನಗರದಿಂದ ಸುಮಾರು 12 ಕಿಮೀ ದೂರದಲ್ಲಿದೆ. ಪಣಂಬೂರು ಕಡಲತೀರವು ಮಂಗಳೂರಿನ ಸ್ವಚ್ಛ ಮತ್ತು ಉತ್ತಮವಾಗಿ ನಿರ್ವಹಿಸುವ ಕಡಲತೀರಗಳಲ್ಲಿ ಒಂದಾಗಿದೆ. ಪಣಂಬೂರು ಕಡಲ ತೀರವು ಜೆಟ್ ಸ್ಕೀ, ಬೋಟಿಂಗ್, ಕುದುರೆ ಸವಾರಿ, ಒಂಟೆ ಸವಾರಿ ಮುಂತಾದ ವಿಶಾಲ ವ್ಯಾಪ್ತಿಯ ಕ್ರೀಡೆ ಮತ್ತು ಚಟುವಟಿಕೆಗಳನ್ನು ಹೊಂದಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಗುಣಮಟ್ಟದ ಸಮಯ ವಿಶ್ರಾಂತಿ ಮತ್ತು ಕಳೆಯಲು ಪಣಂಬೂರು ಬೀಚ್ ತೀರದಲ್ಲಿ ಕುಟೀರಗಳು ಇವೆ.

ಸುರತ್ಕಲ್ ಬೀಚ್

ಸುರತ್ಕಲ್ ಬೀಚ್ಈ ಸುಂದರವಾದ ಕಡಲ ತೀರ ಕರ್ನಾಟಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕೆಲವು ನಿಮಿಷಗಳ ದೂರ, ಹಾಗೂ ಮಂಗಳೂರು ನಗರದಿಂದ ಸುಮಾರು 18 ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಲೈಟ್ ಹೌಸ್, ಪ್ರಶಾಂತತೆ ಮತ್ತು ಪ್ರಕೃತಿ ಸೌಂದರ್ಯದಿಂದಾಗಿ ಇದು ಪಿಕ್ನಿಕ್ ತಾಣವಾಗಿ ಬಹಳ ಜನಪ್ರಿಯವಾಗಿದೆ.

 

ಇತರ ಪ್ರಮುಖ ಸ್ಥಳಗಳು
ಕದ್ರಿ ಪಾರ್ಕ್
ಕದ್ರಿ ಪಾರ್ಕ್

ಕದ್ರಿ ಪಾರ್ಕ್

ಹಂಪನಕಟ್ಟದಿಂದ ಪೂರ್ವಕ್ಕೆ 4 ಕಿ.ಮೀ ದೂರದಲ್ಲಿ ಹಾಗು NH-66 ಕ್ಕೆ ಹತ್ತಿರದಲ್ಲಿ ಕದ್ರಿ ಹಿಲ್ ಪಾರ್ಕ್ ಇದೆ. ಇದು ಮಂಗಳೂರಿನ ಅತಿ ದೊಡ್ಡ ಉದ್ಯಾನವಾಗಿದ್ದು ಸರ್ಕಾರದ ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಬರುತ್ತದೆ. ಪಾರ್ಕ್ ಮುಖ್ಯವಾಗಿ ಮಕ್ಕಳಿಗೆ ಮೀಸಲಾಗಿದೆ. ಮಕ್ಕಳ ರೈಲು, ಮತ್ತು ಇತರ ಸೌಲಭ್ಯಗಳು ಪಾರ್ಕ್ ನಲ್ಲಿವೆ.

ಪಿಲಿಕುಳ ನಿಸರ್ಗಧಾಮ
ಪಿಲಿಕುಳ ಕೆರೆ

ಪಿಲಿಕುಳ ಕೆರೆ

ಮಂಗಳೂರಿನಿಂದ ಕೇವಲ 13 ಕಿ.ಮೀ. ದೂರದಲ್ಲಿ ಮೂಡುಶೆಡ್ಡೆ ಎಂಬಲ್ಲಿರುವ ಪಿಲಿಕುಳ ನಿಸರ್ಗಧಾಮವು ವೈವಿಧ್ಯಮಯ ವೈಶಿಷ್ಟ್ಯಗಳಿರುವ ಪಾರ್ಕ್ ಆಗಿದೆ. ಪಿಲಿಕುಳವು ಇಲ್ಲಿನ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವೈಜ್ಞಾನಿಕ ಆಸಕ್ತಿಯ ಹಲವು ವಿಷಯದಿಂದ ಜನರನ್ನು ತನ್ನೆಡೆ ಆಕರ್ಷಿಸುತ್ತಿದೆ. ಈ ಉದ್ಯಾನವನವು 370 ಎಕರೆ ಪ್ರದೇಶದಲ್ಲಿ ಉಷ್ಣವಲಯದ ಅರಣ್ಯ ಮತ್ತು ಪಿಲಿಕುಳ ಸರೋವರವನ್ನು ಹೊಂದಿದೆ. ಈ ತಾಣವು ಜೈವಿಕ ಉದ್ಯಾನವನ, ಅರ್ಬೊರೇಟಂ, ಸೈನ್ಸ್ ಸೆಂಟರ್, ಬೋಟಿಂಗ್ ಸೆಂಟರ್, ವಾಟರ್ ಅಮ್ಯೂಸ್ಮೆಂಟ್ ಪಾರ್ಕ್ ಮತ್ತು ಗಾಲ್ಫ್ ಕೋರ್ಸ್ ಇತ್ಯಾದಿಗಳನ್ನುಒಳಗೊಂಡಿದೆ.

ಸೈಂಟ್ ಎಲೋಷಿಯಸ್ ಚಾಪೆಲ್
ಎಲೋಶಿಯಸ್ ಚ್ಯಾಪೆಲ್

ಎಲೋಶಿಯಸ್ ಚ್ಯಾಪೆಲ್

ಸೇಂಟ್ ಅಲೋಶಿಯಸ್ ಚಾಪೆಲನ್ನು 1899-1900ರಲ್ಲಿ ನಿರ್ಮಿಸಲಾಗಿದೆ. ಈ ಚರ್ಚ್ ನಗರದ ಹೃದಯ ಭಾಗದಿಂದ ಕೇವಲ 1 ಕಿ.ಮೀ ದೂರದಲ್ಲಿದೆ. ಚರ್ಚ್ ನ ಗೋಡೆಗಳು ಮತ್ತು ಛಾವಣಿಗಳು ಇಟಲಿಯ ಆಂಟೋನಿಯೊ ಮೊಸ್ಚೆನಿಯ ವರ್ಣಚಿತ್ರಗಳನ್ನು ಒಳಗೊಂಡಿದೆ.

ಉಳ್ಳಾಲ ದರ್ಗಾ
ಉಳ್ಳಾಲ ದರ್ಗಾ

ಉಳ್ಳಾಲ ದರ್ಗಾ

ಉಳ್ಳಾಲದಲ್ಲಿ ಸೈಯದ್ ಮೊಹಮ್ಮದ್ ಶೇರಿಫುಲ್ ಮದನಿಯವರ ದರ್ಗಾ ಇದೆ. ಸೈಯದ್ ಮೊಹಮ್ಮದ್ ಶೇರಿಫುಲ್ ಮದನಿಯವರು 500 ವರ್ಷಗಳ ಹಿಂದೆ ಮದೀನಾದಿಂದ ಉಳ್ಳಾಲಕ್ಕೆ ಬಂದರು ಎಂದು ಹೇಳಲಾಗುತ್ತದೆ. ಪ್ರತಿ 5 ವರ್ಷಗಳಿಗೊಮ್ಮೆ ಇಲ್ಲಿ ಆಚರಿಸಲಾಗುವ ಉರುಸ್ ಉತ್ಸವದಲ್ಲಿ ಭಾಗವಹಿಸಲು ಅನೇಕ ರಾಜ್ಯಗಳಿಂದ ಸಾವಿರಾರು ಜನರು ಮಸೀದಿಗೆ ಭೇಟಿ ನೀಡುತ್ತಾರೆ.

1000 ಕಂಬಗಳ ಬಸದಿ
ಸಾವಿರ ಕಂಬದ ಬಸದಿ

ಸಾವಿರ ಕಂಬದ ಬಸದಿ

ಸಾವಿರ ಕಂಬಗಳ ಬಸದಿ ಜೈನರ ಪವಿತ್ರ ದೇವಾಲಯವಾಗಿದ್ದು ಮಂಗಳೂರಿನಿಂದ 35 ಕಿ.ಮೀ. ದೂರದ ಮೂಡಬಿದಿರೆಯಲ್ಲಿದೆ. ಈ ಬಸದಿ ಜೈನ ಸಂತ ಶ್ರೀ ಚಂದ್ರನಾಥರಿಗೆ ಸಮರ್ಪಿಸಲಾಗಿದೆ. ಈ ದೇವಸ್ಥಾನವು ನೇಪಾಳಿ ಶೈಲಿಯ ವಾಸ್ತುಶಿಲ್ಪ ಹೊಂದಿದೆ. 1000 ಸ್ತಂಭದ ಬಸದಿಯು ಸುಮಾರು 560 ವರ್ಷ ಹಳೆಯದಾಗಿದೆ. ಬಸದಿಯ ಇತಿಹಾಸವನ್ನು ಗೋಡೆಗಳು ಮತ್ತು ಸ್ತಂಭಗಳ ಮೇಲೆ ಕೆತ್ತಲಾಗಿದೆ. ಬಸದಿಯ ಯಾವುದೇ ಸ್ತಂಭಗಳು ಒಂದೇ ರೀತಿ ಇಲ್ಲ ಎಲ್ಲವು ವಿಭಿನ್ನವಾಗಿ ರಚಿಸಲ್ಪಟ್ಟಿದೆ. ಈ ಬಸದಿಯು ಕಲೆ ಮತ್ತು ವಾಸ್ತುಶಿಲ್ಪ ವೈಭವದಿಂದ ಕೂಡಿದೆ.

ಸುಲ್ತಾನ್ ಬತ್ತೇರಿ
ಸುಲ್ತಾನ್ ಬತ್ತೇರಿ

ಸುಲ್ತಾನ್ ಬತ್ತೇರಿ

ಇದು ಮಂಗಳೂರು ನಗರ ಬಸ್ ನಿಲ್ದಾಣದಿಂದ 6 ಕಿ.ಮೀ ದೂರದಲ್ಲಿರುವ ಬೋಳೂರಿನಲ್ಲಿದೆ. ಗುರುಪುರ ನದಿಗೆ ಯುದ್ಧನೌಕೆ ಪ್ರವೇಶಿಸುವುದನ್ನು ತಡೆಗಟ್ಟಲು ಟಿಪ್ಪು ಸುಲ್ತಾನನು ಈ ಕೋಟೆ ಯನ್ನು ನಿರ್ಮಿಸಿದನು. ಈ ಕೋಟೆ ಕಪ್ಪು ಕಲ್ಲುಗಳಲ್ಲಿ ನಿರ್ಮಿಸಲ್ಪಟ್ಟಿದೆ ಮತ್ತು ಇದರ ನಿರ್ಮಾಣವು ಅತ್ಯಾಕರ್ಷಕವಾಗಿದೆ. ಇದು ಒಂದು ಕಾವಲು ಗೋಪುರವಗಿದ್ದರೂ, ಸುತ್ತಲೂ ಫಿರಂಗಿಗಳನ್ನು ವ್ಯವಸ್ಥಿತವಾಗಿ ಜೋಡಿಸಿರುವ ಒಂದು ಸಣ್ನ ಕೋಟೆಯಹಾಗೆ ಕಾಣುತ್ತದೆ.

ಜಮಲಾಬಾದ್ ಕೋಟೆ

ಜಮಲಾಬಾದ್ ಕೋಟೆಯು ಮಂಗಳೂರಿನಿಂದ 65 ಕಿ.ಮೀ. ಹಾಗೂ ಬೆಳ್ತಂಗಡಿಯಿಂದ 8 ಕಿ.ಮೀ. ದೂರದಲ್ಲಿದೆ. ಈ ಕೋಟೆಯನ್ನು 1794ರಲ್ಲಿ ಟಿಪ್ಪು ಸುಲ್ತಾನನು ತನ್ನ ತಾಯಿ ಜಮಲಾಬಿಯ ನೆನಪಿಗಾಗಿ ಕಟ್ಟಿದ್ದಾನೆ. ಟ್ರೆಕ್ಕಿಂಗ್ ಪ್ರೀಯರಿಗೆ ಜನಪ್ರೀಯ ತಾಣವಾಗಿದೆ.

ವೇಣೂರು ಗೋಮಟೇಶ್ವರ

ಮಂಗಳೂರಿನಿಂದ ಸುಮಾರು 54 ಕಿ.ಮೀ. ಮತ್ತು ಬೆಳ್ತಂಗಡಿಯಿಂದ ಸುಮಾರು 19 ಕಿ.ಮೀ. ದೂರದಲ್ಲಿದೆ. ಇದು 38 ಅಡಿ ಎತ್ತರದ ಏಕಶಿಲೆಯ ಗೋಮಟೇಶ್ವರನ ಮೂರ್ತಿ ಹಾಗೂ ಜೈನ ಬಸದಿಗಳಿಗೆ ಪ್ರಖ್ಯಾತವಾಗಿದೆ. ಇಲ್ಲಿನ ಗೋಮಟೇಶ್ವರನ ಮೂರ್ತಿಯನ್ನು ಅಮರಶಿಲ್ಪಿ ಜಕಣಾಚಾರಿ ನಿರ್ಮಿಸಿದ್ದಾರೆ ಎನ್ನಲಾಗಿದೆ ಮತ್ತು ಇದನ್ನು ಕ್ರಿ.ಶ. 1604 ರಲ್ಲಿ ತಿಮ್ಮಣ್ಣ ಅಜಿಲರು ಸ್ಥಾಪಿಸಿದ್ದಾರೆ.