ಮುಚ್ಚಿ

ಪ್ರವಾಸೋದ್ಯಮ

ದಕ್ಷಿಣ ಕನ್ನಡ ಕರ್ನಾಟಕದ ಕರಾವಳಿ ಜಿಲ್ಲೆಯಾಗಿದ್ದು ಪಶ್ಚಿಮದಲ್ಲಿ ಆರೇಬಿಯನ್ ಸಮುದ್ರ ಮತ್ತು ಪೂರ್ವದಲ್ಲಿ ಪಶ್ಚಿಮ ಘಟ್ಟಗಳಿಂದ ಸುತ್ತುವರಿದ ನೈಸರ್ಗಿಕ ಸೌಂದರ್ಯದ ಆಕರ್ಷಣೀಯ ತಾಣವಾಗಿದೆ. ಈ ಜಿಲ್ಲೆಯು ಫಲವತ್ತಾದ ಮಣ್ಣು, ಸೊಂಪಾದ ಸಸ್ಯವರ್ಗ, ಹೇರಳವಾದ ಮಳೆ, ಸುಂದರ ಕಡಲ ತೀರಗಳು, ರಮಣೀಯ ಪರ್ವತ ಸಾಲುಗಳು, ಪ್ರಸಿದ್ಧ ಹಾಗು ಪುರಾತನ ದೇವಾಲಯಗಳು ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ ಮತ್ತು ಇಲ್ಲಿನ ಸಮೃದ್ಧ ಸಂಸ್ಕೃತಿ ಈ ಜಿಲ್ಲೆಯನ್ನು ಅತ್ಯಂತ ವಿಶಿಷ್ಟ ಪ್ರವಾಸಿ ತಾಣವನ್ನಾಗಿಸಿದೆ.

ದಕ್ಷಿಣ ಕನ್ನಡವು ಯಕ್ಷಗಾನ ಕಲೆಗೆ ಪ್ರಸಿದ್ಧಿಯಾಗಿದೆ. ಯಕ್ಷಗಾನವು ನೃತ್ಯ, ಸಂಗೀತ, ಸಂಭಾಷಣೆ, ವೇಷಭೂಷಣ, ಪ್ರಸಾಧನ ಮತ್ತು ವೇದಿಕೆಯ ತಂತ್ರಗಳನ್ನು ಅನನ್ಯ ಶೈಲಿ ಮತ್ತು ರೂಪದೊಂದಿಗೆ ಸಂಯೋಜಿಸುವ ಒಂದು ಸಾಂಪ್ರದಾಯಿಕ ನೃತ್ಯ ರೂಪಕವಾಗಿದೆ. ಯಕ್ಷಗಾನವನ್ನು ಸಾಂಪ್ರದಾಯಿಕವಾಗಿ ಮುಸ್ಸಂಜೆಯಿಂದ ಮುಂಜಾನೆಯವರೆಗೆ ಪ್ರದರ್ಶಿಸಲಾಗುತ್ತದೆ. ಈ ಜಿಲ್ಲೆಯಲ್ಲಿ ಕಂಬಳವನ್ನು (ಕೋಣಗಳನ್ನು ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆ) ವಾರ್ಷಿಕ ಉತ್ಸವವಾಗಿ ಸುಗ್ಗಿ ಋತುವಿನಲ್ಲಿ ಆಚರಿಸುತ್ತಾರೆ, ಇದು ರಾಜ್ಯದ ಈ ಭಾಗದ ಕೃಷಿಕ ಸಮುದಾಯದಲ್ಲಿ ಜನಪ್ರಿಯ ಆಟವಾಗಿದೆ. ಭೂತಾರಾಧನೆ, ನಾಗಾರಾಧನೆ ಈ ಪ್ರದೇಶದ ಅವಿಭಾಜ್ಯ ಅಂಗವಾಗಿದೆ .

ಬೆಂಗಳೂರಿನಿಂದ 347 ಕೀ ಮೀ ದೂರದ ಕಡಲ ತೀರದಲ್ಲಿರುವ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನವಾಗಿದ್ದು ಹಲವಾರು ಶತಮಾನಗಳಿಂದ ವ್ಯಾಪಾರದ ಕೇಂದ್ರವಾಗಿದೆ. ಈ ಪ್ರದೇಶವು ಕ್ರಿಸ್ತ ಪೂರ್ವ 14 ನೇ ಶತಮಾನದ ಅಂತ್ಯದ ತನಕ ಆಳುಪರಿಂದ ಆಳಲ್ಪಟ್ಟಿತ್ತು ಹಾಗು ಅವರ ಆಡಳಿತ ರಾಜಧಾನಿಯಾಗಿತ್ತು. 14 ನೇ ಶತಮಾನದಿಂದ 16 ನೇ ಶತಮಾನದವರೆಗೆ ಈ ಪ್ರದೇಶವು ವಿಜಯ ನಗರದ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. 15 ನೇ ಶತಮಾನದಲ್ಲಿ ಕರಾವಳಿಗೆ ಬಂದ ಪೋರ್ಚುಗೀಸರ ಪ್ರಭಾವದಿಂದ ವ್ಯಾಪಾರಕ್ಕಾಗಿ ಕಾರ್ಖಾನೆಗಳು ತೆರೆಯಲ್ಪಟ್ಟವು. 1763 ರಲ್ಲಿ ಹೈದರಾಲಿಯು ವಶಪಡಿಸಿಕೊಂಡು ಮಂಗಳೂರನ್ನು ಮೈಸೂರು ಪ್ರಾಂತ್ಯದ ಮುಖ್ಯ ಬಂದರನ್ನಾಗಿಸಿದನು. 1799 ರಲ್ಲಿ ಟಿಪ್ಪುವಿನ ಸಾಮ್ರಾಜ್ಯದ ಅವನತಿಯ ನಂತರ ಬ್ರಿಟಿಷರು ಮಂಗಳೂರನ್ನು ಕೆನರಾ ಜಿಲ್ಲೆಯ ಕೇಂದ್ರಸ್ಥಾನವಾಗಿ ಮಾಡಿದರು. ಪ್ರಮುಖ ಬಂದರನ್ನು ಹೊಂದಿರುವುದರಿಂದಾಗಿ ಈ ಕರಾವಳಿ ಪಟ್ಟಣವು ಒಂದು ವಾಣಿಜ್ಯ ಕೇಂದ್ರವಾಗಿದೆ .

ಇಲ್ಲಿಯ ಕಿರಿದಾದ ಅಂಕು ಡೊಂಕಾದ ಬೀದಿಗಳು, ಮಣ್ಣಿನ ಹೆಂಚಿನ ಛಾವಣಿಯಿರುವ ವಿಶಿಷ್ಟವಾದ ಮನೆಗಳು ಹಾಗು ಸುತ್ತ ಮುತ್ತಲಿನ ತೆಂಗು, ಬಾಳೆಯ ತೋಟಗಳು, ದೇವಾಲಯಗಳು, ಚರ್ಚ್ ಗಳನ್ನು ನೋಡಿದರೆ ಇನ್ನೂ ಈ ನಗರವು ಎಲ್ಲಿಯೂ ತನ್ನ ಹಳೆಯ ಸಂಪ್ರದಾಯದ ಸೊಗಡನ್ನು ಕಳೆದು ಕೊಂಡಿಲ್ಲ ಎಂದು ಅನಿಸುತ್ತದೆ.

ಜಿಲ್ಲೆಯು ನೈಸಗಿ೯ಕವಾಗಿ ನೋಡಲು ಸುಂದರವಾಗಿದ್ದು ಇಲ್ಲಿಯ ಪ್ರಕೃತಿ ಸೌ೦ದಯ೯ವನ್ನು ನೋಡಲು ದೇಶ ವಿದೇಶಗಳಿ೦ದ ಪ್ರವಾಸಿಗರು ಬರುತ್ತಾರೆ. ರಮಣೀಯವಾದ ಗುಡ್ಡ ಬೆಟ್ಟಗಳು, ಬಯಲು ಸೀಮೆಗಳು, ನಿತ್ಯಹರಿದ್ವಣ೯ದ ಕಾಡುಗಳು, ಕಡಲ ತೀರಗಳು, ಸ೦ಜೆಯ ಹೊತ್ತಿಗೆ ಕಡಲ ತೀರದಲ್ಲಿನ ಸೂರ್ಯಾಸ್ತದ ನೋಟ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಪ್ರಮುಖ ಭಾಷೆಗಳು ತುಳು, ಕೊಂಕಣಿ, ಕನ್ನಡ ಮತ್ತು ಬ್ಯಾರಿ ಭಾಷೆ.