ಧರ್ಮಸ್ಥಳ
ಈ ಪ್ರಸಿದ್ಧ ದೇವಸ್ಥಾನವು ಮಂಗಳೂರಿನ ಪೂರ್ವಕ್ಕೆ ಸುಮಾರು 75 ಕಿ.ಮೀ. ದೂರದಲ್ಲಿ ಬೆಳ್ತಂಗಡಿ ತಾಲೂಕಿನ ಪಶ್ಚಿಮ ಘಟ್ಟಗಳ ಇಳಿಜಾರಿನ ಕಾಡಿನ ಮಧ್ಯದಲ್ಲಿ ಸ್ಥಾಪಿತವಾಗಿದೆ. ಮಂಜುನಾಥ ದೇವಾಲಯವು ಶೈವರ ಆರಾಧ್ಯ ಕೇಂದ್ರವಾಗಿದ್ದು, ಇದು ಮಧ್ವ ವೈಷ್ಣವ ಪಂಥದ ಪುರೋಹಿತರನ್ನು ಹೊಂದಿದೆ ಮತ್ತು ಈ ದೇವಸ್ಥಾನದ ಉಸ್ತುವಾರಿಯನ್ನು ಜೈನ ಪಂಥಕ್ಕೆ ಸೇರಿದ ಹೆಗ್ಗಡೆ ಕುಟುಂಬದವರು ವಂಶ ಪಾರಂಪರ್ಯವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ದೇವಾಲಯದ ಬಳಿ ಬೆಟ್ಟದ ಮೇಲೆ 39 ಅಡಿ ಎತ್ತರದ ಬಾಹುಬಲಿಯ ಮೂರ್ತಿಯನ್ನು 1980 ರಲ್ಲಿ ಸ್ಥಾಪಿಸಲಾಗಿದೆ. ದೇವಾಲಯದ ಎದುರು ಮಂಜುಷ ಎಂಬ ವಸ್ತು ಸಂಗ್ರಹಾಲಯವಿದೆ. ಇಲ್ಲಿ ನಾವು ಪ್ರಾಚೀನ ವಸ್ತುಗಳು, ವರ್ಣಚಿತ್ರಗಳು, ತಾಳೆಗರಿ ಮೇಲಿರುವ ಪ್ರಾಚೀನ ಲಿಪಿಗಳು, ದೇವಾಲಯದ ರಥಗಳು ಇತ್ಯಾದಿ ಸಂಗ್ರಹಗಳನ್ನು ಕಾಣಬಹುದು. ಶ್ರೀ ಕ್ಷೇತ್ರವು ದಾನ ಮತ್ತು ಧಾರ್ಮಕ್ಕೆ ಪ್ರಸಿದ್ಧಿಯಾಗಿದ್ದು,ಇಲ್ಲಿ ನಿತ್ಯವೂ ಅನ್ನದಾಸೋಹ ನಡೆಯುತ್ತದೆ. ಲಕ್ಷ ದೀಪೋತ್ಸವ ವಾರ್ಷಿಕ ಉತ್ಸವದ ಸಂದರ್ಭದಲ್ಲಿ, ಒಂದು ಲಕ್ಷ ದೀಪಗಳು ಬೆಳಗಿಸುವುದು ಇಲ್ಲಿನ ವೈಶಿಷ್ಟ್ಯ. ಈ ಸಂದರ್ಭದಲ್ಲಿ ಸಾಹಿತ್ಯ ಹಾಗು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ತಲುಪುವ ಬಗೆ:
ವಿಮಾನದಲ್ಲಿ
ಮಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 82 ಕಿ.ಮೀ.
ರೈಲಿನಿಂದ
ಮಂಗಳೂರು ರೈಲು ನಿಲ್ದಾಣದಿಂದ ಸುಮಾರು 72 ಕಿ.ಮೀ.
ರಸ್ತೆ ಮೂಲಕ
ಮಂಗಳೂರು ಬಸ್ ನಿಲ್ದಾಣದಿಂದ ಸುಮಾರು 74 ಕಿ.ಮೀ.